ಪುಣೆ -
ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಪ್ರಸಿದ್ಧ ಐತಿಹಾಸಿಕ ನಗರ, ಅದೇ ಹೆಸರಿನ ಜಿಲ್ಲೆ ಹಾಗೂ ವಿಭಾಗದ ಆಡಳಿತ ಸ್ಥಳ. ಸಮುದ್ರ ಮಟ್ಟದಿಂದ ಸುಮಾರು 567 ಮೀ. ಎತ್ತರದಲ್ಲಿ, ಸಹ್ಯಾದ್ರಿ ಗುಡ್ಡಗಳಲ್ಲಿ ಮುಠಾ ಮತ್ತು ಮುಳಾ ನದಿಗಳು ಕೂಡುವ ಎಡೆಯಲ್ಲಿ, ಮುಂಬಯಿ ನಗರದ ಆಗ್ನೇಯಕ್ಕೆ 192 ಕಿ.ಮೀ. ದೂರದಲ್ಲಿ ಉ.ಅ. 18031' ಮತ್ತು ಪೂ. ರೇ. 73054' ಮೇಲೆ ಇದೆ. ಇದು ಮಧ್ಯ ಹಾಗೂ ಪಶ್ಚಿಮ ರೈಲ್ವೇಗಳ ಸಂಧಿ ಸ್ಥಳ. ಪುಣೆ ಜಿಲ್ಲಾ ವಿಸ್ತೀರ್ಣ 15643 ಚ.ಕಿಮೀಗಳು ಜನಸಂಖ್ಯೆ 55,32,532 (2001). ಇಲ್ಲಿಯದು ಸಮಶೀತೋಷ್ಣವಾದ ಆಹ್ಲಾದಕರ ವಾಯುಗುಣ. ವರ್ಷದಲ್ಲಿ ಸುಮಾರು 635 ಮಿ.ಮೀ. ಮಳೆ ಬೀಳುತ್ತದೆ. ಭಾರತದ ರಾಷ್ಟ್ರೀಯ ನಾಯಕರಾಗಿದ್ದ ಲೋಕಮಾನ್ಯ ಬಾಳ ಗಂಗಾಧರ ಟಿಳಕ್, ಗೋಪಾಲಕೃಷ್ಣ ಗೋಖಲೆ, ಮಹರ್ಷಿ ಕರ್ವೆ ಮೊದಲಾದ ಮಹನೀಯರಿಗೂ ಈ ನಗರಕ್ಕೂ ಸಂಬಂಧವಿದೆ. ಇತಿಹಾಸ ಪ್ರಸಿದ್ಧವಾದ ಈ ನಗರ ಸುಂದರ ನೈಸರ್ಗಿಕ ಸನ್ನಿವೇಶದಿಂದ ಕೂಡಿ ಸಾಂಸ್ಕøತಿಕ, ಶೈಕ್ಷಣಿಕ, ರಾಜಕೀಯ ಕೇಂದ್ರವಾಗಿ ಬೆಳೆದಿದೆ. ಈ ನಗರಕ್ಕೆ ದಖನ್ನಿನ ರಾಣಿ ಎಂಬ ಹೆಸರು ಅನ್ವರ್ಥವೆನಿಸಿದೆ. ಬ್ರಿಟಿಷರ ಕಾಲದಲ್ಲಿ ಸುಮಾರು ನೂರು ವರ್ಷಗಳ ಕಾಲ ಇದು ಮುಂಬಯಿ ಪ್ರಾಂತ್ಯದ ಮಳೆಗಾಲದ ರಾಜಧಾನಿಯಾಗಿತ್ತು.

	ಅಹಮ್ಮದ್ ನಗರದ ರಾಜ 1599 ರಲ್ಲಿ ಶಿವಾಜಿಯ ತಾತ ಮಾಳಾಜೀ ಭೋಸಲೆಗೆ ಪುಣೆ ಮತ್ತು ಸುಪಾ ಪರಗಣಗಳನ್ನು ನೀಡಿದ. 1750 ರಲ್ಲಿ ಅಧಿಕಾರಕ್ಕೆ ಬಂದ ಪೇಶ್ವೆ ಬಾಳಾಜಿ ಬಾಜೀರಾಯ ಪುಣೆಯನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. 1803 ರಲ್ಲಿ ಯಶವಂತರಾವ್ ಹೋಳಕರನ ವಿರುದ್ಧ ಬ್ರಿಟಿಷರ ಸಹಾಯವನ್ನು ಪೇಶ್ವೆ ಕೋರಿದಾಗ ಬ್ರಿಟಿಷ್ ಸೈನ್ಯಾಧಿಕಾರಿ ವೆಲ್‍ಸ್ಲಿ ಈ ನಗರವನ್ನು ಆಕ್ರಮಿಸಿಕೊಂಡ. ಖಡಕಿಯ ಕದನದ ಅನಂತರ 1817 ರ ನವಂಬರ್ 1 ರಂದು ಪುಣೆ ಬ್ರಿಟಿಷ್ ವಶಕ್ಕೆ ಬಂತು.

	ಪುಣೆ ದೀರ್ಘ ಕಾಲದಿಂದ ಪ್ರಮುಖ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕೇಂದ್ರವಾಗಿದೆ. 1948 ರಲ್ಲಿ ಸ್ಥಾಪಿತವಾದ ಪುಣೆ ವಿಶ್ವವಿದ್ಯಾಲಯ ಗಣೇಶ ಖಂಡದಲ್ಲಿರುವ ಹಳೆಯ ಸರ್ಕಾರಿ ಭವನದಲ್ಲಿದೆ. ಕಲೆ, ವಿಜ್ಞಾನ, ಕೃಷಿ, (ಎಂಜಿನಿಯರಿಂಗ್), ನ್ಯಾಯಶಾಸ್ತ್ರ, ವಾಣಿಜ್ಯ, ವೈದ್ಯ ಮುಂತಾದ ವಿಷಯಗಳಲ್ಲಿ ಶಿಕ್ಷಣ ನೀಡುವ 12 ಕಾಲೇಜುಗಳಿವೆ. 1917 ರಲ್ಲಿ ಸ್ಥಾಪಿತವಾದ ಭಂಡಾರಕರ್ ಓರಿಯಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಒಂದು ಪ್ರಮುಖ ಸಂಶೋಧನ ಸಂಸ್ಥೆ. ಇಲ್ಲಿ 20,000 ಕ್ಕೂ ಹೆಚ್ಚು ಹಸ್ತಪ್ರತಿಗಳಿವೆ. ರಾಜ್ಯ ಸರ್ಕಾರದ ಅನೇಕ ಇಲಾಖೆಗಳ ಮುಖ್ಯ ಕಾರ್ಯಾಲಯಗಳು ಪುಣೆಯಲ್ಲಿವೆ. ರೇಸ್ ಕೋರ್ಸ್, ಪ್ರಸಾರ ಕೇಂದ್ರ ಮತ್ತು ಹವಾ ಸಮೀಕ್ಷಾಲಯ ಇವೆ. ನಗರದ ಪೂರ್ವದಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಆಡಳಿತದಲ್ಲಿರುವ ದಂಡಿನ ಪ್ರದೇಶವಿದೆ. ಭಾರತ ಸೈನ್ಯದ ದಕ್ಷಿಣ ಆಧಿಪತ್ಯದ ಮತ್ತು ಪುಣೆ ಉಪಕ್ಷೇತ್ರದ ಮುಖ್ಯ ಸ್ಥಾನ ಪುಣೆ. ಇಲ್ಲಿಗೆ 16 ಕಿ.ಮೀ. ದೂರದಲ್ಲಿರುವ ಖಡಕ್‍ವಾಸ್ಲಾದಲ್ಲಿರುವ ಭಾರತ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಎಲ್ಲ ಕ್ಯಾಡೆಟ್‍ಗಳಿಗೆ ಆಧುನಿಕ ಯುದ್ಧ ವಿಧಾನದಲ್ಲಿ ತರಬೇತು ನೀಡಲಾಗುತ್ತದೆ. 4 ಕಿ.ಮೀ. ದೂರದಲ್ಲಿರವು ಲೋಣಾವಳದಲ್ಲಿ ಭಾರತದ ನೌಕಾ ಮತ್ತು ಯಾಂತ್ರಿಕ ತರಬೇತು ಸಂಸ್ಥಾಪನೆಯಾದ ಐ.ಎನ್.ಎಸ್. ಶಿವಾಜಿ ಕಾಲೇಜ್ ಮತ್ತು ಅದರ ಅಂಗವಾದ ಎಂಜಿನಿಯರಿಂಗ್ ಕಾಲೇಜ್ ಇವೆ. ಪುಣೆಯಲ್ಲಿ ಇತರ ಪ್ರಮುಖ ಸಂಸ್ಥೆಗಳು ಇದ್ದ ಸಾಧನಗಳ ಅಧ್ಯಯನ ಸಂಸ್ಥೆ, ಕೃತಕ ಅಂಗ ಕೇಂದ್ರ, ರಾಷ್ಟ್ರೀಯ ರಸಾಯನ ವಿಜ್ಞಾನ ಪ್ರಯೋಗಶಾಲೆ ಮತ್ತು ಭಾರತೀಯ ಚಲನಚಿತ್ರ ಶಿಕ್ಷಣ ಸಂಸ್ಥೆ, ಖಡಕಿಯಲ್ಲಿ ಮದ್ದುಗುಂಡುಗಳ ಕಾರ್ಖಾನೆ ಇದೆ. ಕೆಲವೇ ಕಿ.ಮೀ. ದೂರದಲ್ಲಿರವು ಪಿಂಪ್ರಿಯಲ್ಲಿ ಪೆನಿಸಿಲಿನ್ ಕಾರ್ಖಾನೆ ಇದೆ.

	ಪುಣೆ ನಗರದಲ್ಲಿ ಅನೇಕ ದೇವಾಲಯಗಳೂ, ವಸ್ತು ಸಂಗ್ರಹಾಲಯಗಳೂ, ಚರ್ಚುಗಳೂ, ಯಹೂದ್ಯರ ಆರಾಧನಾ ಮಂದಿರ ಮತ್ತು ಆಸ್ಪತ್ರೆಗಳೂ ಇವೆ. ಎಂಪ್ರಸ್ ಉದ್ಯಾನ, ಶಿವಾಜಿ ಪಾರ್ಕ್, ಮುಳಾ ನದಿಯ ಒಡ್ಡಿನ ಮೇಲೆ ಬಂಡ್ ಉದ್ಯಾನ ಮತ್ತು ಸಂಭಾಜಿ ಪಾರ್ಕ್ ಇವು ಇಲ್ಲಿಯ ಪ್ರಮುಖ ಉದ್ಯಾನಗಳು. ಪುಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳುಂಟು. ಪೇಶ್ವೆಗಳ ಕಾಲದ ಪ್ರಸಿದ್ಧ ಶನಿವಾರ ವಾಡೆ ಅರಮನೆಯ ಅವಶೇಷಗಳು ಮತ್ತು ಮಹತ್ಮಾಗಾಂಧಿಯವರನ್ನು 1942 ರಲ್ಲಿ ಬಂಧನದಲ್ಲಿಡಲಾಗಿದ್ದ ಅಗಾಖಾನ್ ಅರಮನೆ ಇದಕ್ಕೆ ಐತಿಹಾಸಿಕ ಮಹತ್ವವಿದೆ. ಪುಣೆಯ ನೈಋತ್ಯ ಭಾಗದಲ್ಲಿ ದುರ್ಗಾ ಅಥವಾ ಪಾರ್ವತಿಯ ಗುಡಿ ಇರುವ ಪಾರ್ವತಿ ಗುಡ್ಡ ಇದೆ. ಖಡಕ್‍ವಾಸ್ಲಾದಿಂದ ಸುಮಾರು  ಕಿ.ಮೀ. ದೂರದಲ್ಲಿ ಸಿಂಹಗಢ, 37 ಕಿ.ಮೀ. ದೂರದಲ್ಲಿ ಪುರಂದರಗಢ ಕಿಲ್ಲೆಗಳಿವೆ. ಪುಣೆ ನಗರಕ್ಕೆ ಖಡಕ್‍ವಾಸ್ಲಾ ಅಣೆಕಟ್ಟೆಯಿಂದ ನೀರಿನ ಪೂರೈಕೆಯಾಗುತ್ತಿದೆ. ಹತ್ತಿರದ ಗುಡ್ಡಗಳಲ್ಲಿರುವ ತಾತಾ ವಿದ್ಯುತ್ ಕೇಂದ್ರದಿಂದ ವಿದ್ಯುತ್ತು ಒದಗಿಬರುತ್ತದೆ. 

	ಪುಣೆಯಲ್ಲಿ ಹತ್ತಿ ಗಿರಣಿ, ಕಾಗದ ಮತ್ತು ಸಕ್ಕರೆ ಕಾರ್ಖಾನೆಗಳು ಇವೆ. ನಗರದ ಸುತ್ತಮುತ್ತ ಅನೇಕ ಔದ್ಯೋಗಿಕ ಉಪನಗರಗಳು ಬೆಳೆದಿವೆ. ಬಗೆಬಗೆಯ ಸರಕುಗಳನ್ನು ತಯಾರಿಸುವ ಹಲವಾರು ಚಿಕ್ಕ ದೊಡ್ಡ ಕಾರ್ಖಾನೆಗಳು ಪುಣೆಯಿಂದ ಮುಂಬಯಿ, ಅಹಮದ್ ನಗರ, ಸೊಲ್ಲಾಪುರ ಮತ್ತು ಸಾತಾರಾಗಳಿಗೆ ಹೋಗುವ ಮಾರ್ಗಗಳಲ್ಲಿ ಸ್ಥಾಪಿತವಾಗಿವೆ. 1961 ರಲ್ಲಿ ಪಾನ್‍ಪೇಟ್ ಅಣೆಕಟ್ಟು ಒಡೆದಿದ್ದರಿಂದ ಹಳೆಯ ಪುಣೆಯ ಗಮನಾರ್ಹ ಭಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಹೊಸದಾಗಿ ನಿರ್ಮಿತವಾದ ಮನೆಗಳಿಂದ ಕೂಡಿರುವ ನಗರ ಭಾಗ ವಿಶಿಷ್ಟವಾಗಿ ಬೆಳೆಯುತ್ತಿದೆ. 

	ಪುಣೆ ಜಿಲ್ಲೆಯ ವಿಸ್ತೀರ್ಣ 15.625 ಚ.ಕಿ.ಮೀ.; ಜನಸಂಖ್ಯೆ 31,78,029 (1971). ಈ ಜಿಲ್ಲೆ ತ್ರಿಕೋಣಾಕಾರವಾಗಿದೆ. ಪಶ್ಚಿಮದ ಸಹ್ಯಾದ್ರಿ ಗುಡ್ಡಗಳು ಅದರ ತಳ. ನೈಋತ್ಯದಲ್ಲಿ ಭೀಮಾ ಮತ್ತು ನೀರಾ ನದಿಗಳ ಸಂಗಮದ ಬಳಿಯ ಪ್ರದೇಶ ಅದರ ಅಗ್ರ. ಪಶ್ಚಿಮದ ನೆಲ ಅಲೆಅಲೆಯಾಗಿ ಏರಿಳಿಯುತ್ತದೆ. ಬೆನ್ನೇಣುಗಳಿಂದ ಕೂಡಿದ ಅನೇಕ ಗುಡ್ಡಗಳ ಸಾಲುಗಳು ಜಿಲ್ಲೆಯೊಳಗೆ ಪ್ರವೇಶಿಸುತ್ತವೆ. ಹೆಚ್ಚು ಮಳೆ ಬೀಳುವ ಪಶ್ಚಿಮದ ಎತ್ತರ ಪ್ರದೇಶ ಅರಣ್ಯಾವೃತ. ಅಲ್ಲಿಂದ ಆಗ್ನೇಯದ ಶುಷ್ಕ ಪ್ರದೇಶದ ಕಡೆಗೆ ಭೂಮಿ ಇಳಿಜಾರಾಗಿದೆ. ಈ ಪ್ರದೇಶ ಬರಕ್ಕೆ ತುತ್ತಾಗುವುದುಂಟು. ಮುಟಾ ಮತ್ತು ನೀರಾ ನದಿಗಳ ಕಾಲುವೆಗಳು ನೀರಾವರಿಗೆ ಉಪಯುಕ್ತವಾಗಿವೆ. ಪುಣೆ ಜಿಲ್ಲೆ ರಾಜ್ಯದ ಎರಡನೆಯ ದೊಡ್ಡ ಕೈಗಾರಿಕಾ ಕ್ಷೇತ್ರ. ಇಲ್ಲಿಯ ಕೆಲಸಗಾರರಲ್ಲಿ ಸುಮಾರು ಅರ್ಧದಷ್ಟು ಜನ ಕೃಷಿಯಲ್ಲಿ ತೊಡಗಿದ್ದಾರೆ. ಜೋಳ, ಬತ್ತ ಮತ್ತು ಬಾಜ್ರಾ ಮುಖ್ಯ ಧಾನ್ಯಗಳು. ಕಬ್ಬು ಇನ್ನೊಂದು ಪ್ರಮುಖ ಬೆಳೆ. ಇದರಿಂದ ಹೇರಳವಾಗಿ ಬೆಲ್ಲ ತಯಾರಾಗುತ್ತದೆ. ಜುನ್ನಾರ್ ಎಂಬುದು ಹಣ್ಣು ಮತ್ತು ತರಕಾರಿಗಳ ಮಾರಾಟದ ಕೇಂದ್ರ. ಮಧ್ಯ ಮತ್ತು ದಕ್ಷಿಣ ರೈಲ್ವೆಗಳ ಮೀಟರ್‍ಗೇಜ್ ರೈಲು ಮಾರ್ಗಗಳು ಜಿಲ್ಲೆಯೊಳಗಿಂದ ಹಾದು ಹೋಗುತ್ತವೆ. 

	ಜಿಲ್ಲೆಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಹಲವು ಸಹ್ಯಾದ್ರಿ ಗುಡ್ಡಗಳಲ್ಲಿವೆ. ಲೋಣಾವಳಿ, ಶಿವನೇರಿ ಮೊದಲಾದ ಜಿಲ್ಲೆಗಳು ಪ್ರವಾಸಿ ಆಕರ್ಷಣೆಗಳು. ಶಿವನೇರಿ ಶಿವಾಜಿಯ ಜನ್ಮಸ್ಥಳ. ಜ್ಯೋತಿರ್ಲಿಂಗದ ಗುಡಿ ಇರುವ ಭೀಮಾಶಂಕರ, ಸಂತ ತುಕಾರಾಮನ ಜನ್ಮಸ್ಥಳವಾದ ದೇಹು, ಸಂತ ಜ್ಞಾನೇಶ್ವರನ ಜನ್ಮಸ್ಥಳವಾದ ಅಳಂದಿ ಮೊದಲಾದವು ಧಾರ್ಮಿಕ ಮಹತ್ವವುಳ್ಳವು. ಕಾರ್ಲಾ ಮತ್ತು ಭಾಜಾ ಗುಹೆಗಳ ಬೌದ್ಧ ಶಿಲ್ಪಕಲಾಕೇಂದ್ರಗಳು. 

	ಪುಣೆ ವಿಭಾಗದಲ್ಲಿ ಪುಣೆ ಅಹಮದ್ ನಗರ, ಜಳಗಾಂವ್, ಧುಳಿಯಾ, ಠಾಣಾ, ನಾಶಿಕ್ ಮತ್ತು ಕೊಲಾಬಾ ಜಿಲ್ಲೆಗಳಿವೆ. 
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ